ಧನಂಜಯ : -
ಸಂಸ್ಕಂತದಲ್ಲಿ ರೂಪಕ (ದೃಶ್ಯಕಾವ್ಯ : ನಾಟಕ) ಲಕ್ಷಣಗಳನ್ನು ವಿವರಿಸುವ ಪ್ರಸಿದ್ಧ ಶಾಸ್ತ್ರಗ್ರಂಥವಾದ "ದಶರೂಪಕ"ದ ಕರ್ತೃ.   ತಾನು ವಿಷ್ಣು ಎಂಬಾತನ ಪುತ್ರನೆಂದೂ ಮುಂಜರಾಜನ ಆಸ್ಥಾನದಲ್ಲಿ ಇದ್ದವನೆಂದೂ ಹೇಳಿಕೊಂಡಿದ್ದಾನೆ.  ಈ ಮುಂಜರಾಜ ಮಾಳವದ ಪರಮಾರ ವಂಶದವನೆಂದೂ  ಕ್ರಿ. ಶ. ಸುಮಾರು 974 - 996 ರ ಅವಧಿಯಲ್ಲಿ ಆಳಿದವನೆಂದೂ ವಿದ್ವಾಂಸರ ಮತ.  ಮುಂಜರಾಜನಿಗೆ ವಾಕ್ಪತಿ, ಉತ್ಫಲ, ಅಮೋಘವರ್ಷ ಎಂಬ ಹೆಸರೂಗಳೂ ಇದ್ದುವಂತೆ.  ಒಟ್ಟಿನಲ್ಲಿ ಧನಂಜಯನ ಕಾಲ ಕ್ರಿ. ಶ. ಸುಮಾರು 950 - 1000 ಎನ್ನಬಹುದು.

ಸಂಸ್ಕøತದಲ್ಲಿ 10 ಬಗೆಯ ರೂಪಕಗಳನ್ನೂ 18 ಬಗೆಯ ಉಪರೂಪಕಗಳನ್ನೂ ಶಾಸ್ತ್ರಕಾರರು ಗುರುತಿಸಿದ್ದಾರೆ.  ಅವುಗಳಲ್ಲಿ 10 ಬಗೆಯ ರೂಪಕಗಳ ವಿಚಾರವನ್ನು ದಶರೂಪಕ ಗ್ರಂಥ ವಿವರಿಸುತ್ತದೆ.  ಈ ಗ್ರಂಥ ರೂಢಿಯಂತೆ ಪದ್ಯಸೂತ್ರಗಳಲ್ಲಿದೆ (ಕಾರಿಕೆ).  ಗ್ರಂಥದಲ್ಲಿರುವ ಒಟ್ಟು ಕಾರಿಕೆಗಳ ಸಂಖ್ಯೆ 302.  ಇವುಗಳಲ್ಲಿ  ಹೆಚ್ಚು ಭಾಗ ಅನುಷ್ಟುಪ್ ಛಂದಸ್ಸಿನಲ್ಲೂ ಕೇವಲ 18 ಕಾರಿಕೆಗಳು ಮಾತ್ರ ಬೇರೆ ಬೇರೆ ಅಕ್ಷರವೃತ್ತಗಳಲ್ಲೂ ಇವೆ.  ಈ ಗ್ರಂಥದಲ್ಲಿ ನಾಲ್ಕು ಪ್ರಕಾಶಗಳಿವೆ (ವಿಭಾಗ).  (1 ನೆಯ ಪ್ರಕಾಶದಲ್ಲಿ 68 ಕಾರಿಕೆಗಳು ; 2 ನೆಯದರಲ್ಲಿ 72 ;  3 ನೆಯದರಲ್ಲಿ 76 ; 4 ನೆಯದರಲ್ಲಿ 86),  ಈ ನಾಲ್ಕು ಪ್ರಕಾಶಗಳು ಕ್ರಮವಾಗಿ ರೂಪಕಗಳಲ್ಲಿನ ಕಥಾವಸ್ತು ಹಾಗೂ ಅದರ ವಿನ್ಯಾಸ ಕ್ರಮ, ರೂಪಕಗಳಲ್ಲಿ ಬರುವ ನಾಯಕ ನಾಯಿಕೆಯರ  ಗುಣ ಲಕ್ಷಣ ಭೇದಗಳು, ರೂಪಕಗಳಲ್ಲಿನ ಹತ್ತು ಪ್ರಕಾರಗಳ ಪ್ರತ್ಯೇಕ ಲಕ್ಷಣಗಳು, ರೂಪಕಗಳಲ್ಲಿ ರಸ ಅಭಿವ್ಯಕ್ತವಾಗುವ ರೀತಿ ಹಾಗೂ ರಸದ ಪ್ರಕಾರಗಳು - ಇವನ್ನು ವಿವರಿಸುತ್ತವೆ.

	ಧನಿಕ, ಬಹುರೂಪಮಿಶ್ರ, ಭಟ್ಟನೃಸಿಂಹ, ಸಾಹಸಾಂಕ, ದೇವಪಾಣಿ, ಕುರವಿರಾಮ ಇವರು ದಶರೂಪಕಕ್ಕೆ ವ್ಯಾಖ್ಯಾನಗಳನ್ನು ಬರೆದವರು.  ಇವುಗಳಲ್ಲಿ ಧನಂಜಯನ ತಮ್ಮನೆಂದು ಹೇಳಲಾದ ಧನಿಕನ ದಶರೂಪಾವಲೋಕ ಎಂಬ ವ್ಯಾಖ್ಯೆ ದಶರೂಪಕದ ಜೊತೆಯಲ್ಲೇ ಪ್ರಕಟವಾಗಿ ಪ್ರಖ್ಯಾತವಾಗಿದೆ.  ಈ ವ್ಯಾಖ್ಯೆ ಖಂಡನೆ ಮಂಡನೆಗಳಿಗೆ ಯೋಗ್ಯವಾದ ವಾದಶೈಲಿಯ ಗದ್ಯದಲ್ಲಿದೆ.  ಬೇರೆ ಬೇರೆ ಗ್ರಂಥಗಳಿಂದೆತ್ತಿದ ಸುಮಾರು 350 ಉದಾಹರಣೆಗಳನ್ನೊಳಗೊಂಡಿದೆ.  ಬಹುರೂಪ ಮಿಶ್ರ ಭಟ್ಟನೃಸಿಂಹರ ವ್ಯಾಖ್ಯೆಗಳು ಅಪ್ರಕಟಿತ ಉಳಿದವು ದೊರೆತಿಲ್ಲ.

	ಸಂಸ್ಕøತ ನಾಟ್ಯಶಾಸ್ತ್ರ ಗ್ರಂಥಗಳಲ್ಲಿ ದಶರೂಪಕ್ಕೆ ಮುಖ್ಯವಾದ ಒಂದು ಸ್ಥಾನ ಮೀಸಲಿದೆ.  ಭರತಮುನಿಯ ನಾಟ್ಯಶಾಸ್ತ್ರದಲ್ಲಿನ ರೂಪಕಶಾಸ್ತ್ರ ವಿಭಾಗಕ್ಕೆ ಇದೊಂದು ಸಂಗ್ರಹವೂ ಸರಳವೂ ಆದ ಕೈಪಿಡಿಯಾಗಿದೆ.  (ನಾಯಿಕಾಭೇದ ಮುಂತಾದ ಕೆಲವು ವಿವರಗಳಲ್ಲಿ ಮಾತ್ರ ನಾಟ್ಯಶಾಸ್ತ್ರಕ್ಕೂ ದಶರೂಪಕಕ್ಕೂ ಭಿನ್ನತೆಯಿದೆ).  ಭಾರತೀಯ ರಸಶಾಸ್ತ್ರಕ್ಕೆ ಈ ಗ್ರಂಥ ವಿದ್ವದಧ್ಯಯನದ ಒಂದು ನೂತನ ಅಧ್ಯಾಯವನ್ನು ಸೇರಿಸಿಕೊಟ್ಟಿದೆ.  (ದಶರೂಪಕದ ಮತದಲ್ಲಿ ರೂಪಕಗಳ ದೃಷ್ಟಿಯಿಂದ ರಸಗಳು ಎಂಟೇ.  ಶಾಂತ ಇಲ್ಲ.  ಶಬ್ದಗಳಲ್ಲಿನ ತಾತ್ಪರ್ಯ ಶಕ್ತಿಯಿಂದಲೇ ರಸನಿಷ್ಪತ್ತಿಯಾಗುತ್ತದೆ ಎಂದು ವಾದಿಸುವ ಈ ಗ್ರಂಥ ಧ್ವನಿವಾದಿಗಳ ವ್ಯಂಜನಾ ವೃತ್ತಿಯನ್ನು ವಿರೋದಿಸುತ್ತದೆ.)  ಈ ಗ್ರಂಥದಲ್ಲಿನ ಕಾರಿಕೆಗಳೂ ಸರಳವೂ ಸಂಕ್ಷೇಪವೂ ನಿಷ್ಕøಷ್ಟವೂ ಆಗಿದೆ.  ಧನಿಕನ ವ್ಯಾಖ್ಯೆ ಈ ಕಾರಿಕೆಗಳಿಗೆ ಅವಳಿಯೆಂಬಂತೆ ಹೊಂದಿಕೊಂಡು ಸಹಜವೂ ಉಪಯೂಕ್ತವೂ ಅವಶ್ಯವೂ ಆದ ಜೊತೆಯಾಗಿದೆ.  ಧನಿಕ ಕೊಟ್ಟಿರುವ ವಿಪುಲ ಉದಾಹರಣೆಗಳು ಕಾರಿಕೆಗಳ ಮೇಲೆ ಹೊನಲುಬೆಳಕು ಚೆಲ್ಲುತ್ತವೆ ಮಾತ್ರವಲ್ಲದೆ ಅವು ಕೂಡಿ ಒಂದು ಮನೋಹರ ಕಾವ್ಯಖಂಡ ಸಂಕಲನವಾಗುತ್ತವೆ.  ಕಾರಿಕಾಕಾರ ಹಾಗೂ ವ್ಯಾಖ್ಯಾಕಾರರ ಶಾಸ್ತ್ರನಿಷ್ಠೆಯೊಂದಿಗೆ ರಸೈಕ ದೃಷ್ಟಿ ಬೆರೆತಿರುವುದರಿಂದ ಈ ಗ್ರಂಥ ಸುಷ್ಠುವಾಗಿದೆ.  ಭಾರತೀಯ ಕಾವ್ಯ ಮೀಮಾಂಸೆ ನಾಟ್ಯ ಮೀಮಾಂಸೆ ಹಾಗೂ ರಸಮೀಮಾಂಸೆಯ ಪರಿಷ್ಕರಣ ಯುಗದಲ್ಲಿ ಮತ್ತು ಸಂಸ್ಕøತ ರೂಪಕ ಸಾಹಿತ್ಯದ ಅಸ್ತಮಯ ಕಾಲದಲ್ಲಿ ಹುಟ್ಟಿಬಂದ ಈ ಗ್ರಂಥಕ್ಕೆ ಅದೇ ಕಾರಣದಿಂದ ಐತಿಹಾಸಿಕ ಮೌಲ್ಯವೂ ಒದಗಿದೆ.
(ಎಸ್‍ಯು.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ